ಛಾಯಾಗ್ರಾಹಕರಾದ ವಿಕಿ ರಾಯ್ ಗುವಾಹಟಿಯ ಶಿಶು ಸರೋತಿ ಎನ್ನುವ ಎನ್‍ಜಿಒಕ್ಕೆ ಸಿಲ್ಸಿಲಾ ದಾಸ್(37) ಅವರ ಫೋಟೊಗಳನ್ನು ತೆಗೆಯಲು ಹೋಗಿದ್ದರು. ಅವರು ಎನ್‍ಜಿಒದಲ್ಲಿರುವಷ್ಟೂ ಕಾಲ ಸಿಲ್ಸಿಲಾ ಅವರು ಒಬ್ಬರೇ ಇರುವ ಚಿತ್ರವನ್ನು ತೆಗೆಯಲು ಆಗಲೇ ಇಲ್ಲ. ಏಕೆಂದರೆ, ಶಿಲ್ಸಿಲಾ ಅವರು ತಮ್ಮ ಆತ್ಮೀಯ ಗೆಳತಿಯರಾದ ಸಿಮಿ ಕಲ್ತಿತಾ(34) ಮತ್ತು ರುನು ಮೇಧಿ(35) ಜತೆಯೇ ಸದಾ ಇರುತ್ತಿದ್ದರು. ಅವರನ್ನು ಬಿಟ್ಟು ಒಂದು ಕ್ಷಣವೂ ಇರುತ್ತಿರಲಿಲ್ಲ.
ವಿಶೇಷಚೇತನ ಮಹಿಳೆಯರಿಗೆ ನೆರವು ನೀಡುವ ಕೆಲಸ ಮಾಡುತ್ತಿರುವ ಬಿಜೋಯಿನಿ ನೆಟ್‍ವರ್ಕ್ ಫಾರ್ ವುಮೆನ್ ವಿತ್ ಡಿಸೆಬಿಲಿಟಿ ಸಂಸ್ಥೆಯ ಸಂಚಾಲಕಿಯಾಗಿದ್ದಾರೆ ಸಿಲ್ಸಿಲಾ. ಅವರಿಗೆ ಎರಡೂವರೆ ವರ್ಷವಾಗಿದ್ದಾಗಲೇ ಪೋಲಿಯಾ ದಾಳಿ ಮಾಡಿತು. ಅಂಗವೈಕಲ್ಯದ ಕಾರಣದಿಂದಾಗಿ ಅವರು ಶಾಲೆಗೆ ಸೇರಿದ್ದೇ 9ನೇ ವಯಸ್ಸಿಗೆ. ಪೋಲಿಯೋ ಪೀಡಿತ ಮಗುವೊಂದು ಶಾಲೆಗೆ ಬಂತೆಂಬ ಸುದ್ದಿ ತಿಳಿದು ಇತರ ಮಕ್ಕಳ ಪೋಷಕರು ಅಸಮಾಧಾನಗೊಂಡರು. ಸಿಲ್ಸಿಲಾಗಿರುವ ಪೋಲಿಯೋ ತಮ್ಮ ಮಕ್ಕಳಿಗೂ ಬಂದುಬಿಟ್ಟರೆ ಎಂದೆಲ್ಲ ಯೋಚಿಸಿ, ಸಿಲ್ಸಿಲಾ ಜೊತೆ ತಮ್ಮ ಮಕ್ಕಳು ಸ್ನೇಹ ಬೆಳೆಸದಂತೆ ನೋಡಿಕೊಂಡರು.
ಸಾಮಾಜಿಕವಾಗಿ ತಮಗೆ ಎದುರಾದ ಈ ಬಗೆಯ ನಿರ್ಲಕ್ಷ್ಯ ಮತ್ತು ಭೇದಭಾವಗಳ ಹೊರತಾಗಿಯೂ ಸಿಲ್ಸಿಲಾ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಳು. ಅದಕ್ಕೆ ಅವರ ತಂದೆ ನೀಡಿದ ಬೆಂಬಲದ ಒತ್ತಾಸೆ ದೊಡ್ಡದು. ಟೀ ಮಾರುತ್ತಿದ್ದ ಸಿಲ್ಸಿಲಾಳ ತಂದೆ ಮಗಳಲ್ಲಿ ಆತ್ಮವಿಶ್ವಾಸ ಬೆಳೆಸಿದರು. "ಹತ್ತು ವರ್ಷಗಳ ಹಿಂದೆ ಅವರು ನಿಧನರಾದರು. ಆದರೆ, ಅವರ ಉತ್ತೇಜಕ ಮಾತುಗಳು ಇನ್ನೂ ನೆನಪಲ್ಲಿವೆ. ‘ನಿನ್ನ ಭವಿಷ್ಯವನ್ನು ಹೇಗೆ ಚೆಂದ ಮಾಡಬಹುದು ಎನ್ನುವ ಬಗ್ಗೆ ನಾವು ಆಲೋಚಿಸೋಣ' ಎಂದು ಅಪ್ಪ ಹೇಳುತ್ತಿದ್ದರು''ಎಂದು ನೆನಪಿಸಿಕೊಳ್ಳುತ್ತಾರೆ ಸಿಲ್ಸಿಲಾ. ಈಗ ತಮ್ಮ ಕುಟುಂಬ ಪೋಷಣೆಯ ಹೊಣೆ ಹೊತ್ತಿರುವ ಸಿಲ್ಸಿಲಾ,ತಮ್ಮ ಕುರಿತು ತಂದೆ ಹೊಂದಿದ್ದ ನಿರೀಕ್ಷೆಗಳನ್ನು ಈಡೇರಿಸಿದ ಭಾವನೆಯನ್ನು ಹೊಂದಿದ್ದಾರೆ.
ಬಿಜೋಯಿನಿ ನೆಟ್‍ವರ್ಕ್‍ನ ಸಹಾಯಕ ಸಂಚಾಲಕಿಯಾಗಿರುವ ರುನು ಅವರದು ಇನ್ನೊಂದು ಕತೆ. ಅವರು ಅವಧಿಗೆ ಮುನ್ನವೇ ಹುಟ್ಟಿದ ಮಗು. ಅವರ ತಾಯಿಗೆ ಅವಳಿ ಮಕ್ಕಳು. ಈ ಅವಳಿಯಲ್ಲಿ ಬದುಕುಳಿದ ರುನುಗೆ ಸೆರೆಬ್ರಲ್ ಪಾಲ್ಸಿ(ಸಿಪಿ) ವಕ್ಕರಿಸಿತು. ಇದೊಂದು ರೋಗಗಳ ಗುಚ್ಛ. ಸೆರೆಬ್ರಲ್ ಪಾಲ್ಸಿಯಿಂದಾಗಿ ಶರೀರದ ಭಂಗಿ, ನಡೆಯುವ ಮತ್ತು ಶರೀರವನ್ನು ಬ್ಯಾಲೆನ್ಸ್ ಮಾಡುವ ಸಾಮರ್ಥ್ಯವೇ ಹೋಗಿ ಬಿಡುತ್ತದೆ. ಇದು ಮಕ್ಕಳನ್ನು ಕಾಡುವ ಹೆಮ್ಮಾರಿಯಂಥ ಕಾಯಿಲೆ. ಇದರಿಂದಾಗಿ ರುನು ಅವರ ಮಾತನಾಡುವ ಮತ್ತು ನಡೆಯುವ ಶಕ್ತಿ ಕುಗ್ಗಿತು.
ಇವರ ತಂದೆ ಸರಕಾರಿ ನೌಕರ. ಮನೆಯಲ್ಲಿಯೇ ಮಗಳಿಗೆ ಫಿಸಿಯೋಥೆರಪಿಗಳನ್ನು ಕೊಡಿಸಿದರು. ಮಗಳಿಗಾಗಿ ಶಕ್ತಿಮೀರಿ ಕೆಲಸ ಮಾಡಿದರು. ರುನುವಿನ ಕಸಿನ್ ಸಿಸ್ಟರ್ ಸಿಮಿ ಸಹ ಇದೇ ಸೆರೆಬ್ರಲ್ ಪಾಲ್ಸಿಗೆ ಸಿಲುಕಿದ್ದಳು. ಅಂಗ ನ್ಯೂನತೆಯ ಈ ರುನು ಮತ್ತು ಸಿವಿ ಜೊತೆಗೆ 2016ರಲ್ಲಿ ಸಿಲ್ಸಿಲಾ ಅವರ ಗೆಳೆತನವಾಯಿತು. ಈ ಮೂವರು ಗೆಳತಿಯರರ ಪಯಣ ಶಿಶೋ ಸರೋತಿ ಸಂಸ್ಥೆಯ ಮೂಲಕ ಮುಂದುವರಿಯಿತು. ವಿಶೇಷಚೇತನರ ಶಿಕ್ಷಣ, ಪುನರ್ವಸತಿ ಮತ್ತು ಹಕ್ಕುಗಳಿಗಾಗಿ ಈ ಸಂಸ್ಥೆ ಕೆಲಸ ಮಾಡುತ್ತಾ ಬಂದಿದೆ. ನಿಮ್ಮ ಗೆಳೆತನದ ಬಗ್ಗೆ ಸ್ವಲ್ಪ ಹೇಳಿ ಎಂದರೆ, ಸಿಲ್ಸಿಲಾ ಅವರು, ‘ಶೋಲೆ’ ಸಿನಿಮಾದ ‘ಯೇ ದೋಸ್ತಿ ಹಮ್ ನಹಿ ತೋಡೆಂಗೆ’ ಎನ್ನುವ ಹಾಡನ್ನು ತಕ್ಷಣವೇ ಹಾಡುತ್ತಾರೆ. ಇವರಿಗೆ ಗಾಯಕರಲ್ಲಿ ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಮತ್ತು ಸುನಿಧಿ ಚವಾಣ್ ಎಂದರೆ ಪ್ರಾಣ.
ಈ ಮೂವರು ಮಹಿಳೆಯರು ಪ್ರೀತಿಯಿಂದ ಹಾಡಿಗೊಂಡು, ಹರಟೆ ಹೊಡೆಯುತ್ತಾ, ಥಿಯೇಟರ್ ಗಳಲ್ಲಿ ಸಿನಿಮಾ ನೋಡಿಕೊಂಡು ಮಜವಾಗಿದ್ದಾರೆ. ಒಟ್ಟಿಗೆ ಸುತ್ತಾಡುವುದೆಂದರೆ ಈ ಮೂವರಿಗೆ ಇಷ್ಟ. ಚಿತ್ರಕಲಾ ನಿಪುಣೆಯರಾದ ಈ ಮೂವರೂ ನಾನಾ ಬಹುಮಾನಗಳನ್ನು ಗೆದ್ದಿದ್ದಾರೆ. ಸ್ಪರ್ಧೆಗಳಿಗಾಗಿ ಕೋಲ್ಕೊತಾ, ದಿಲ್ಲಿ, ಆಗ್ರಾ, ಜೈಪುರಕ್ಕೆ ಹೋಗಿ ಬಂದಿದ್ದಾರೆ. ಪೆಯಿಂಟಿಂಗ್‍ನಲ್ಲಿ ರುನು, ಇಕೆಬಾನಾದಲ್ಲಿ (ಹೂವುಗಳನ್ನು ಜೋಡಿಸುವ ಜಪಾನಿ ಕಲೆ) ಸಿಮಿ ಬಹುಮಾನಗಳನ್ನು ಗೆದ್ದಿದ್ದಾರೆ. ಕೆಲಸದ ಮೇಲೆ ಸಿಲ್ಸಿಲಾ ಮತ್ತು ರುನು ಅವರು ಶಿಲ್ಲಾಂಗ್, ತೇಜ್‍ಪುರ್, ಬಕ್ಸಾ ಮತ್ತಿತರ ಊರುಗಳಲ್ಲಿ ಸುತ್ತಾಡಿದ್ದಾರೆ. ಸಿಮಿ ಮತ್ತು ರುನು ಅವರು ಡಾರ್ಜಿಲಿಂಗ್‍ನ ಒಂದು ವಿಂಟರ್ ಕ್ಯಾಂಪ್‍ನಲ್ಲಿ ಪಾಲ್ಗೊಂಡಿದ್ದರು. 2020ರಲ್ಲಿ ರುನು ಕೊಲೊಂಬೋಗೆ ಹೋಗಿದ್ದರು. ಇದು ಅವರ ಮೊದಲ ವಿದೇಶ ಪ್ರವಾಸ. ಕೊಲೊಂಬೋದಲ್ಲಿ ಅವರು ಎಂಟು ದೇಶಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಸಿಲ್ಸಿಲಾ ಅವರಿಗೆ ರಾಜಕೀಯ ಪ್ರವೇಶಿಸುವ ಗುರಿಯೂ ಇದೆ. ತಾನು ವಿಶೇಷಚೇತನ ಸಮುದಾಯದ ಧ್ವನಿಯಾಗಬೇಕು, ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎನ್ನುವ ಉದ್ದೇಶ ಅವರಿಗಿದೆ. ವಿಶೇಷಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸದಲ್ಲಿ ಈ ಮೂವರು ಗೆಳತಿಯರು ಕೈಜೋಡಿಸಿದ್ದಾರೆ. ತುಟಿಯಂಚಿನಲ್ಲಿ ನಗೆ, ಕಂಗಳಲ್ಲಿ ಕನಸುಗಳನ್ನು ಹೊತ್ತ ಈ ಗೆಳತಿಯರ ಪಯಣ ಮುಂದುವರಿದಿದೆ.